Fork me on GitHub

ಡಿವಿಜಿ ಯವರ ಮಂಕುತಿಮ್ಮನ ಕಗ್ಗ

ಹಾಡಿರುವವರು ಸ್ವಾಮಿ ಬ್ರಹ್ಮಾನಂದಜಿ

ಶ್ರೀ ವಿಷ್ಣು ವಿಶ್ವಾದಿ ಮೂಲ ಮಾಯಾಲೋಲ । ದೇವ ಸರ್ವೇಶ ಪರಬೊಮ್ಮನೆಂದು ಜನಂ ॥ ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ । ಆ ವಿಚಿತ್ರಕೆ ನಮಿಸೊ – ಮಂಕುತಿಮ್ಮ ॥ ೧ ॥

ಜೀವ ಜಡರೂಪ ಪ್ರಪಂಚವನದಾವುದೋ। ಆವರಿಸಿಕೊಂಡುಮೊಳನೆರೆದುಮಿಹುದಂತೆ॥ ಭಾವಕೊಳಪಡದಂತೆ ಅಳತೆಗಳವಡದಂತೆ। ಆ ವಿಶೇಷಕೆ ನಮಿಸೊ – ಮಂಕುತಿಮ್ಮ ॥ ೨ ॥

ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ। ಮಹಿಮೆಯಿಂ ಜಗವಾಗಿ ಜೀವವೇಷದಲಿ ॥ ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ । ಗಹನ ತತ್ತ್ವಕೆ ಶರಣೊ – ಮಂಕುತಿಮ್ಮ ॥ ೩ ॥

ಏನು ಜೀವನದರ್ಥ? ಏನು ಪ್ರಪಂಚಾರ್ಥ? । ಏನು ಜೀವಪ್ರಪಂಚಗಳ ಸಂಬಂಧ? ॥ ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು? । ಜ್ಞಾನಪ್ರಮಾಣವೇಂ? – ಮಂಕುತಿಮ್ಮ ॥ ೪ ॥

ಏನು ಪ್ರಪಂಚವಿದು! ಏನು ಧಾಳಾಧಾಳಿ!। ಏನದ್ಭುತಾಪಾರಶಕ್ತಿನಿರ್ಘಾತ! ॥ ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು?। ಏನರ್ಥವಿದಕೆಲ್ಲ?- ಮಂಕುತಿಮ್ಮ ॥ ೧೦ ॥

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? । ನಾವರಿಯಲಾರದೆಲ್ಲದರೊಟ್ಟು ಹೆಸರೆ? ॥ ಕಾವನೊರ್ವನಿರಲ್ಕೆ ಜಗದ ಕಥಯೇಕಿಂತು? । ಸಾವು ಹುಟ್ಟುಗಳೇನು? – ಮಂಕುತಿಮ್ಮ ॥ ೫ ॥

ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ । ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ॥ ಬದುಕೇನು ಸಾವೇನು ಸೊದೆಯೇನು ವಿಷವೇನು? । ಉದಕಬುದ್ಬುದವೆಲ್ಲ! – ಮಂಕುತಿಮ್ಮ ॥ ೧೮ ॥

ತಡಕಾಟ ಬದುಕೆಲ್ಲವೇಕಾಕಿಜೀವ ತ । ನ್ನೊಡನಾಡಿ ಜೀವಗಳ ತಡಕಿ ಕೈಚಾಚಿ ॥ ಪಿಡಿಯಲಲೆದಾಡುಗುಂ, ಪ್ರೀತಿ ಋಣ ಮಮತೆಗಳ । ಮಡುವೊಳೋಲಾಡುತ್ತೆ – ಮಂಕುತಿಮ್ಮ ॥ ೧೮೬ ॥

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? । ಬಗೆದು ಬಿಡಿಸುವರಾರು ಸೊಜಿಗವನಿದನು? ॥ ಜಗವ ನಿರವಿಸಿದ ಕೈಯೊದಾದೊಡೇಕಿಂತು । ಬಗೆಬಗೆಯ ಜೀವಗತಿ? – ಮಂಕುತಿಮ್ಮ ॥ ೬ ॥

ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು । ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ॥ ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು । ಬಂದುದೀ ವೈಷಮ್ಯ? – ಮಂಕುತಿಮ್ಮ ॥ ೧೪ ॥

ಬದುಕಿಗಾರ್ ನಾಯಕರು, ಏಕನೊ ಅನೇಕರೋ? । ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ? ॥ ಕುದುರುವುದೆಂತು ಈಯವ್ಯವಸ್ಥ್ರೆಯ ಪಾಡು? । ಅದಿಗುದಿಯೆ ಗತಿಯೇನೋ? – ಮಂಕುತಿಮ್ಮ ॥ ೭ ॥

ಜೀವಗತಿಗೊಂದು ರೇಖಾಲೇಖವಿರಬೇಕು । ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ॥ ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? । ಆವುದೀ ಜಗಕಾದಿ? – ಮಂಕುತಿಮ್ಮ ॥ ೨೫ ॥

ತರಣಿಶಶಿಪಥಗಳನು, ಧರೆವರುಣಗತಿಗಲನು । ಮರುದಗ್ನಿವೇಗಗಳ ನಿಯಮಿಸಿಹ ದಕ್ಷನ್ ॥ ನರನರಸಿಕೊಳಲಿ ದಾರಿಯ ತನಗೆ ತಾನೆಂದು । ತೊರೆದನೇತಕೆ ನಮ್ಮ? – ಮಂಕುತಿಮ್ಮ ॥ ೫೩೭ ॥

ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು । ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ ॥ ಗೋಳ್ಕರದರೇನು ಫಲ? ಗುದ್ದಾಡಲೇನು ಫಲ? । ಪಲ್ಕಿರಿದು ತಾಳಿಕೊಳೊ- ಮಂಕುತಿಮ್ಮ ॥ ೬೪೩ ॥

ವ್ಯರ್ಥವೀ ಜೀವನದ ಬಡಿದಾಟವೆನ್ನದಿರು । ಅರ್ಥವಹುದದು ನಿನಗೆ ಪೂರ್ಣದರ್ಶನದಿಂ ॥ ನರ್ತಿಪನು ಜಡಜೀವರೂಪಂಗಳಲಿ । ಪೂರ್ತಿಯಿದನರಿಯೆ ಸೊಗ - ಮಂಕುತಿಮ್ಮ ॥ ೨೭೧ ॥

ಬದುಕು ಕದನವೆಂದಂಜಿ ಬಿಟ್ಟೋಡುವನು । ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ॥ ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ- । ನೆದುರು ನಿಲೆ ಬಿದಿಯೊಲಿವ – ಮಂಕುತಿಮ್ಮ ॥ ೫೯೮ ॥

ಬೆದಕಾಟ ಬದುಕೆಲ್ಲ; ಚಣಚಣವು ಹೊಸ ಹಸಿವು । ಅದಕಾಗಿ ಇದಕಾಗಿ ಮತ್ತೊಂದಕಾಗಿ ॥ ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ । ಕುದಿಯುತಿಹುದಾವಗಂ – ಮಂಕುತಿಮ್ಮ ॥ ೨೦೮ ॥

ಬಾಳ ಹಳಿವುದದೇಕೆ? ಗೋಳ ಕರೆವುದದೇಕೆ? । ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ॥ ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ । ಪಾಲುಗೊಳಲಬೇಡ - ಮಂಕುತಿಮ್ಮ ॥ ೨೬೬ ॥

ಜೀವನವದೊಂದು ಪರಮೈಶ್ವರ್ಯ ಬೊಮ್ಮನದು । ಸೇವೆಯದನೂರ್ಜಿತಂಗೊಳಿಸುವೆಲ್ಲೆಸಕ ॥ ಈವರಾರ್ ಕೊಳುವರಾರೆಲ್ಲರೊಂದಾಗಿರಲು? । ನೈವೇದ್ಯಭಾಗಿ ನೀಂ – ಮಂಕುತಿಮ್ಮ ॥ ೨೫೦ ॥

ಹಾಳು ಹಾಳೆಲ್ಲ ಬಾಳೆನ್ನುತಿರ್ದೊಡೆಯುಮದ- । ರೂಳಿಗವ ತಪ್ಪಿಸುವ ಜಾಣನೆಲ್ಲಿಹನು? ॥ ಊಳಿಗವೊ ಕಾಳಗವೊ ಕೂಳ್ಕರೆಯೊ ಗೋಳ್ಕರೆಯೊ । ಬಾಳು ಬಾಳದೆ ಬಿಡದು – ಮಂಕುತಿಮ್ಮ ॥ ೨೪೯ ॥

ದ್ರಾಕ್ಷಿರಸವೇನಲ್ಲ ಜೀವನದ ತಿರುಳಾರ್ಗಮ್ । ಇಕ್ಷುದಂಡದವೊಲದು ಕಷ್ಟಭೋಜನವೆ ॥ ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ । ಮಾಕ್ಷಿಕರು ಮಿಕ್ಕೆಲ್ಲ – ಮಂಕುತಿಮ್ಮ ॥ ೨೬೦ ॥

ಅದು ಬೇಕು ಇದು ಬೇಕು ಮತ್ತೊಂದು ಬೇಕೆಂದು । ಬೆದಕುತಿರುವುದು ಲೋಕ ಸೊಗದಿರವನೆಳಸಿ ॥ ಹೃದಯಗುಹೆಯಾ ಸುಖಧ್ಯಾನದೂಟೆಯೆ ಸಾಕ್ಷಿ । ಮುದಗಳಮಿತದ ನಿಧಿಗೆ – ಮಂಕುತಿಮ್ಮ ॥ ೨೨೪ ॥

ಗೋಳಾಡಲುಂ ಬೇಡ, ಲೋಲಾಪ್ತಿಯುಂ ಬೇಡ । ಬಾಳು ಪರಚೇತನದ ಕೇಳಿಯೆಂದೆಣಿಸಿ ॥ ಪಾಲಿಗನು ನೀನದರೊಳೆನಿಪಂತೆ ಬಾಳುತಿರು । ಕೇಳಿಯುಂ ಧರ್ಮವೆಲೊ – ಮಂಕುತಿಮ್ಮ ॥ ೨೬೪ ॥

ದಾಸರೋ ನಾವೆಲ್ಲ ಶುನಕನಂದದಿ ಜಗದಿ । ವಾಸನೆಗಳೆಳೆತಕ್ಕೆ ದಿಕ್ಕು ದಿಕ್ಕಿನಲಿ ॥ ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು । ವಾಸನಾಕ್ಷಯ ಮೋಕ್ಷ – ಮಂಕುತಿಮ್ಮ ॥ ೩೮೫ ॥

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ । ಚಿನ್ನದಾತುರಕಿಂತ ಹೆಣ್ಣುಗಂಡೊಲವು ॥ ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ । ತಿನ್ನುವುದದಾತ್ಮವನೆ – ಮಂಕುತಿಮ್ಮ ॥ ೬೫೨ ॥

ಸಿರಿಮಾತ್ರಕೇನಲ್ಲ, ಪೆಣ್ ಮಾತ್ರಕೇನಲ್ಲ । ಕರುಬಿ ಜನ ಕೆಸರುದಾರಿಯಲಿ ಸಾಗುವುದು ॥ ಬಿರುದ ಗಳಿಸಲಿಕೆಸಪ, ಹೆಸರ ಪಸರಿಸಲೆಸಪ । ದುರಿತಗಳ್ಗೆಣೆಯುಂಟೆ? – ಮಂಕುತಿಮ್ಮ ॥ ೬೫೭ ॥

ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು । ಬೇಕೆನುತ ಬೊಬ್ಬಿಡುತಲಿಹ ಘಟವನಿದನು ॥ ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ । ಸಾಕೆನಿಪುದೆಂದಿಗಲೊ – ಮಂಕುತಿಮ್ಮ ॥ ೩೭೧ ॥

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ । ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ॥ ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ । ಕೊನೆಯೆಲ್ಲಿ? ಚಿಂತಿಸೆಲೊ – ಮಂಕುತಿಮ್ಮ ॥ ೨೧೧ ॥

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ । ತಳದ ಕಸ ತೇಲುತ್ತ ಬಗ್ಗಡವದಹುದು ॥ ಕಲಕದದ್ದೆದೆ ಕೊಂಚ ಬಿಟ್ಟಿದ್ದೊಡದು ಮರಳಿ । ತಿಳಿಯಹುದು ಶಾಂತಿಯಲಿ – ಮಂಕುತಿಮ್ಮ ॥ ೮೨೯ ॥

ಆವ ಕಡೆ ಹಾರುವುದೊ! ಆವ ಕಡೆ ತಿರುಗುವುದೊ । ಆವಾಗಳಾವಕಡೆಗೆರಗುವುದೊ ಹಕ್ಕಿ! ॥ ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ । ಜೀವಮಾರ್ಗವನೂಹ್ಯ – ಮಂಕುತಿಮ್ಮ ॥ ೭೩೨ ॥

ಏನೊ ಕಣ್ಣನು ಪಿಡಿವುದೇನೊ ದಿಗಿಲಾಗಿಪುದು । ಏನನೋ ನೆನೆದು ಸರ್ರೆಂದು ಹಾರುವುದು ॥ ಬಾನೊಳಾಡುವ ಹಕ್ಕಿಗದುವೆ ನಿತ್ಯಾನುಭವ । ನೀನದನು ಮೀರಿಹೆಯ? – ಮಂಕುತಿಮ್ಮ ॥ ೭೩೧ ॥

ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್ । ಕಾಣಿಸುವರನ್ನವನು? ಹಸಿವವರ ಗುರುವು ॥ ಮಾನವನುಮಂತುದರಶಿಷ್ಯನವನಾ ರಸನೆ । ನಾನಾವಯವಗಳಲಿ - ಮಂಕುತಿಮ್ಮ ॥ ೨೭೮ ॥

ಧಾರುಣೀಸುತೆಯವೊಲು ದೃಢಮನಸ್ಕರದಾರು? । ಮಾರೀಚಹರಣವಡ್ಡಾಡಲೇನಾಯ್ತು? ॥ ವಾರಿಧಿಯೊಳಡಗಿ ನಿದ್ರಿಪ ಬಾಡವವೊ ತೃಷ್ಣೆ । ಆರದನು ಕೆರಳಿಪರೊ! - ಮಂಕುತಿಮ್ಮ ॥ ೨೭೭ ॥

ಜನಕಜೆಯ ದರುಶನಿದಿನಾಯ್ತು ರಾವಣ ಚಪಲ । ಕನಕಮೃಗದರುಶನದೆ ಜಾನಕಿಯ ಚಪಲ ॥ ಜನವವನ ನಿಂದಿಪುದು, ಕನಿಕರಿಪುದಾಕೆಯಲಿ । ಮನದ ಬಗೆಯರಿಯದದು – ಮಂಕುತಿಮ್ಮ ॥ ೩೮೩ ॥

ಹೊಟ್ಟೆಯಲಿ ಹಸಿವು, ಮನದಲಿ ಮಮತೆ – ಈ ಎರಡು । ಗುಟ್ಟು ಕೀಲುಗಳಿಹವು ಸೃಷ್ಟಿಯಂತ್ರದಲಿ ॥ ಕಟ್ಟಿಪುವು ಕೋಟೆಗಳ, ಕೀಳಿಪುವು ತಾರೆಗಳ । ಸೊಟ್ಟಾಗಿಪುವು ನಿನ್ನ – ಮಂಕುತಿಮ್ಮ ॥ ೩೮೪ ॥

ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ । ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ ॥ ಹೊಟ್ಟೆತುಂಬಿದ ತೋಳ ಮಲಗೀತು; ನೀಂ ಪೆರರ । ದಿಟ್ಟಿಸುತ ಕರುಬುವೆಯೊ – ಮಂಕುತಿಮ್ಮ ॥ ೨೦೦ ॥

ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ? । ನರಕವೆದೆಯಲಿ ನೆಲಸೆ ನಿದ್ದೆಗೆಡೆಯೆಲ್ಲಿ? ॥ ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ? । ಕರುಬಿದನ ಹರಿ ಪೊರೆಗೆ – ಮಂಕುತಿಮ್ಮ ॥ ೨೦೧ ॥

ಕೈಕೇಯಿ ಸತ್ಯಭಾಮೆಯರಂಶವಿರದ ಪೆಣ್ । ಲೋಕದೊಳಗಿರಳು; ಬೆಳೆವುದು ಲೋಕವವರಿಂ ॥ ಸಾಕಿ ಸಲಹುವ ಮತ್ಸರವದು ಸೃಷ್ಟಿಯುಪಾಯ । ಬೇಕದಕೆ ನಗು ಸಹನೆ – ಮಂಕುತಿಮ್ಮ ॥ ೪೧೮ ॥

ರಾವಣನ ದಶಶಿರವದೇಂ? ನರನು ಶತಶಿರನು । ಸಾವಿರಾಸ್ಯಗಳನೊಂದರೊಳಣಗಿಸಿಹನು ॥ ಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುಮಾಗಿ । ಭೂವ್ಯೊಮಕತಿಶಯನು – ಮಂಕುತಿಮ್ಮ ॥ ೨೦೨ ॥

ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳು । ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು ॥ ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು । ನೆಲೆಯೆಲ್ಲಿ ನಿದ್ದೆಗೆಲೊ? – ಮಂಕುತಿಮ್ಮ ॥ ೨೦೩ ॥

ಶ್ವಾನ ತಿಪ್ಪೆಯ ಮೇಲೆ ಮಲಗಿರಲು ಪೂರ್ವಿಕ- । ಜ್ಞಾನ ಪಶ್ಚಾತ್ತಾಪ ಶುಭಚಿಂತೆಯಂತೆ ॥ ಏನೋ ವಾಸನೆ ಬೀಸಲದು ಹಾರಿ ದುಮುಕುವುದು । ಮಾನವನ ಮನಸಂತು – ಮಂಕುತಿಮ್ಮ ॥ ೯೦೫ ॥

ಈ ಜಗದ ಗಂಧ ಪರಿಪರಿ ಹಸಿವ ಕೆಣಕುತಿರೆ । ಭೋಜನವ ನೀಡನೆನೆ ಮನ ಸುಮ್ಮನಿಹುದೆ? ॥ ಸಾಜಗಳ ಕೊಲ್ಲೆನುವ ಹಠಯೋಗಕಿಂತ ಸರಿ । ರಾಜಯೋಗದುಪಾಯ – ಮಂಕುತಿಮ್ಮ ॥ ೩೭೪ ॥

ತೃಪ್ತಿಯರಿಯದ ವಾಂಛೆ, ಜೀರ್ಣಿಸದ ಭುಕ್ತಿವೊಲು । ಗುಪ್ತದಲಿ ಕೊಳೆಯುತ್ತೆ ವಿಷಬೀಜವಾಗಿ ॥ ಪ್ರಾಪ್ತಿಗೊಳಿಪುದು ಜೀವಕುನ್ಮಾದತಾಪಗಳ । ಸುಪ್ತವಹುದೆಂತಿಚ್ಛೆ? – ಮಂಕುತಿಮ್ಮ ॥ ೩೭೯ ॥

ಮನೆಯ ತೊರೆದೋಡಲೇಂ? ವನಗುಹೆಯ ಸಾರಲೇಂ? । ತನುವನುಗ್ರವ್ರತಗಳಿಂದೆ ದಂಡಿಸಲೇಂ? ॥ ಬಿನದಗಳನರಸಿ ನೀನೂರೂರೊಳಲೆದೊಡೇಂ? । ಮನವ ತೊರೆದಿರಲಹುದೆ – ಮಂಕುತಿಮ್ಮ ॥ ೩೭೩ ॥

ವನದಿ ನಿರ್ಜನದಿ ಮೌನದಿ ತಪವನೆಸಗುವನ । ನೆನಪಿನಲಿ ಪಿಂತಿನನುಭವವುಳಿಯದೇನು? ॥ ಇವಿನೋಟ ಸವಿಯೂಟ ಕಿನಿಸು ಕರುಬುಗಳಾಟ । ಕನಲುತಿಹುವಾಳದಲಿ – ಮಂಕುತಿಮ್ಮ ॥ ೩೭೨ ॥

ಮನವನಾಳ್ವುದು ಹಟದ ಮಗುವನಾಳುವ ನಯದೆ । ಇನಿತಿನಿತು ಸವಿಯುಣಿಸುಸವಿಕಥೆಗಳಿಂದೆ ॥ ಅನುಕೂಲಿಸದು ಬರಿಯ ಕೂಗು ಬಡಿತಗಳಿನದು । ಇನಿತಿತ್ತು ಮರಸಿನಿತ – ಮಂಕುತಿಮ್ಮ ॥ ೩೭೫ ॥

ಕಲ್ಮಷದ ವಲ್ಮೀಕವೆಂದೊಡಲ ಜರೆಯದಿರು । ಬ್ರಹ್ಮಪುರಿಯೆಂದದನು ಋಷಿಗಳೊರೆದಿಹರು ॥ ಹಮ್ಮುಳ್ಳ ಹಯವ ಕಾಪಿಟ್ತು ಕಡಿವಣ ತೊಡಿಸೆ । ನಮ್ಮ ಗುರಿಗೈದಿಪುದು – ಮಂಕುತಿಮ್ಮ ॥ ೩೯೬ ॥

ಕಾಯವನು ಮೃದ್ಭಾಂಡ ಮಾಂಸಪಿಂಡವೆನುತ್ತೆ । ಹೇಯವೆಂದೆಂದೊಡಾತ್ಮಂಗಪ್ಪುದೇನು? ॥ ಆಯುಧವನದನು ತೊರೆದಾತ್ಮನೇಂಗೈದಪನು । ನ್ಯಾಯ ತನುವಿಗಮಿರಲಿ – ಮಂಕುತಿಮ್ಮ ॥ ೩೮೯ ॥

ದೇಹವೆಂಬುದು ಕುದುರೆಯಾತ್ಮನದರಾರೋಹಿ । ವಾಹನವನುಪವಾಸವಿರಿಸೆ ನಡೆದೀತೆ? ॥ ರೋಹಿ ಜಾಗ್ರತೆದಪ್ಪೆ ಯಾತ್ರೆ ಸುಖ ಸಾಗೀತೆ? । ಸ್ನೇಹವೆರಡಕಮುಚಿತ – ಮಂಕುತಿಮ್ಮ ॥ ೩೯೭ ॥

ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ । ಹೊನಲು ನೂರೀ ಬಾಳ ಕಡಲನುಬ್ಬಿಸಲಿ ॥ ತನುಬಂಧ ಕಳಚಿ, ಜೀವವಖಂಡಚೇತನದ । ಕುಣಿತದಲಿ ಕೂಡಿರಲಿ – ಮಂಕುತಿಮ್ಮ ॥ ೭೯೪ ॥

ಕುದಿ ಹೆಚ್ಚೆ ವೆಗಟಹುದು; ಕಡಿಮೆಯಿರೆ ಹಸಿನಾತ । ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ ॥ ಅದರವೊಲೆ ಮನದ ಹದ, ಅದನೆಚ್ಚರದಿ ನೋಡು । ಬದುಕು ಸೊಗ ಹದದಿಂದ – ಮಂಕುತಿಮ್ಮ ॥ ೩೭೮ ॥

ಏನೇನು ಹಾರಾಟ ಸುಖಕೆಂದು ಲೋಕದಲಿ! । ತಾನಾಗಿ ಗಾಳಿವೊಲ್ ಬಂದ ಸುಖವೆ ಸುಖ ॥ ನೀನೆ ಕೈಬೀಸಿಕೊಳೆ ನೋವು ಬೆವರುಗಳೆ ಫಲ । ಮಾಣು ಮನದುಬ್ಬಸವ – ಮಂಕುತಿಮ್ಮ ॥ ೮೨೧ ॥

ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ । ಹುಲ್ಲು ಬಯಲೊಂದೆಡೆಯಿನೊಂದಕ್ಕೆ ನೆಗೆದು ॥ ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊ- । ಡೆಲ್ಲಿಯೋ ಸುಖ ನಿನಗೆ ? - ಮಂಕುತಿಮ್ಮ ॥ ೩೦೧ ॥

ಪ್ರತ್ಯೇಕಸುಖವಲ್ಪದುದು, ಗಳಿಗೆತೋರ್ಕೆಯದು । ಆತ್ಮವಿಸ್ತಾರವಾಗಿಪುದೆ ನಿತ್ಯಸುಖ ॥ ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ । ಒಟ್ಟುಬಾಳ್ವುದ ಕಲಿಯೊ – ಮಂಕುತಿಮ್ಮ ॥ ೪೩೨ ॥

ಭ್ರಾಂತಿಯೋ ಸಂಪೂರ್ಣ ಸುಖದಾಶೆ ಬಾಹ್ಯದಲಿ । ಸಾಂತ ಲೋಕದ ಸೌಖ್ಯ, ಖಂಡಖಂಡವದು ॥ ಸ್ವಾಂತಕೃಷಿಯಿಂ ಬ್ರಹ್ಮವೀಕ್ಷೆ ಲಭಿಸಿರ್ದೊಡೇ- । ಕಾಂತ ಪೂರ್ಣಾನಂದ – ಮಂಕುತಿಮ್ಮ ॥ ೮೮೯ ॥

ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ । ತಿರುಗಿಸಲಿ ತನ್ನ ದೃಷ್ಟಿಯನು ನಿರ್ಮಲದಿಂ ॥ ನಿರತಿಶಯ ಸುಖವಲ್ಲಿ, ವಿಶ್ವಾತ್ಮ ವೀಕ್ಷೆಯಲಿ । ಪರಸತ್ತ್ವ ಶಾಂತಿಯಲಿ – ಮಂಕುತಿಮ್ಮ ॥ ೮೮೭ ॥

ಸಾರಸುಖನಿಧಿ ಪರಬ್ರಹ್ಮನಿರುತಿರಲ್ । ಸ್ವಾರಸ್ಯಹೀನರೆನ್ನುವರೆ ಜೀವಿತವೆ? ॥ ಪೌರುಷ ಪ್ರೇಮ ಸೌಂದರ್ಯಗಳುಮಂತೆಯೇ । ಸ್ವಾರಸ್ಯವೋ ರಹಸ್ಯ – ಮಂಕುತಿಮ್ಮ ॥ ೩೨೩ ॥

ಭೋಜನದಿ ಪ್ರಮಭೋಜನ ಪರಬ್ರಹ್ಮರಸ । ಯಾಚಿಸಲ್ಕೇನಿರ್ಪುದದನುಂಡ ಬಳಿಕ? ॥ ತ್ಯಾಜಕ ತ್ಯಾಗ ಸಂತ್ಯಾಜ್ಯ ಭೇದಗಳಿರದೆ । ರಾಜ ನೀಂ ಜಗಕೆಲ್ಲ – ಮಂಕುತಿಮ್ಮ ॥ ೭೫೨ ॥

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ । ಆಭಾಸವನು ಸತ್ಯವೊಂದು ಬೆಮಿಸುವುದುಮ್ ॥ ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ । ಅಭಿಶಾಪ ನರಕುಲಕೆ - ಮಂಕುತಿಮ್ಮ ॥ ೩೧೦ ॥

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು । ತೇಲುತ್ತ ಭಯವ ಕಾಣದೆ ಸಾಗುತಿರಲು ॥ ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ । ಮೇಲ ಕೀಳಾಗಿಪುದು – ಮಂಕುತಿಮ್ಮ ॥ ೩೬೨ ॥

ರದನೋದಯಜ್ವರಕೆ ಸಿಲುಕದಿಹ ಶಿಶುವಿರದು । ವಿಧಿಯೊದೆಗೆ ಸಿಕ್ಕದಿಹ ನರಜಂತುವಿರದು ॥ ಒದೆಪೆಟ್ಟು ಮುಗಿದಂದು ರಾಹುದಂಷ್ಟ್ರದೆ ಹೊರಟ । ವಿಧುಬಿಂಬವೋ ನೀನು – ಮಂಕುತಿಮ್ಮ ॥ ೩೮೭ ॥

ತಾಳಿ ಮೆಲುಮೆಲನೊಮ್ಮೆ ಧಾಳಿ ರಭಸದಿನೊಮ್ಮೆ । ಹೇಳದೆಯೆ ಕೇಳದೆಯೆ ಬಹನು ವಿಧಿರಾಯ ॥ ಕೀಳ ಮೇಲಾಗಿಪನು ಮೇಲ ಕೀಳಾಗಿಪನು । ತಾಳುಮೆಯಿನಿರು ನೀನು – ಮಂಕುತಿಮ್ಮ ॥ ೫೫೦ ॥

ವಿಧಿಗೆ ನೀಂ ಕಾರ್ಯನಕ್ಷೆಯ ವಿಧಿಸ ಹೊರಡದಿರು । ಅಧಿಕಾರಿ ನೀನಲ್ಲ; ವಿಧಿ ಬೆಪ್ಪನಲ್ಲ ॥ ಹದವರಿತು ವಿಧಿ ತಾನೆ ಕುದುರಿಸುವನೆಲ್ಲವನು । ಅದಟದಿರು ನೀನವನ – ಮಂಕುತಿಮ್ಮ ॥ ೫೪೯ ॥

ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ । ಮಣ್ಣೆನುವನ್; ಅವನ ವರ ಮಣ್ಣೆನುವೆ ನೀನು ॥ ಭಿನ್ನಮಿಂತಿರೆ ವಸ್ತುಮೌಲ್ಯಹಳ ಗಣನೆಯೀ । ಪಣ್ಯಕ್ಕೆ ಗತಿಯೆಂತೊ? – ಮಂಕುತಿಮ್ಮ ॥ ೨೧ ॥

ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು? । ಬೆದರಿಕೆಯನದರಿಂದ ನೀಗಿಪನು ಸಖನು ॥ ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ । ವಿಧಿಯಗಸ, ನೀಂ ಕತ್ತೆ – ಮಂಕುತಿಮ್ಮ ॥ ೧೬೧ ॥

ಇದು ನಡೆಯಲಿಲ್ಲವದು ನಿಂತುಹೋಯಿತೆನುತ್ತ । ಎದೆಯುಬ್ಬೆಗವನೊಂದಿ ಕುದಿಯುತಿಹುದೇಕೋ? ॥ ಅಧಿಕಾರಪಟ್ಟವನು ನಿನಗಾರು ಕಟ್ಟಿಹರು? । ವಿಧಿಯ ಮೇಸ್ತ್ರಿಯೇ ನೀನು? – ಮಂಕುತಿಮ್ಮ ॥ ೩೫೮ ॥

ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ । ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ॥ ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು?। ಒರಟು ಕೆಲಸವೊ ಬದುಕು – ಮಂಕುತಿಮ್ಮ ॥ ೫೮೨ ॥

ಅಂತಾನುಮಿಂತಾನುಮೆಂತೊ ನಿನಗಾದಂತೆ । ಶಾಂತೆಯನೆ ನೀನರಸು ಮನ ಕೆರಳಿದಂದು ॥ ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು । ಸ್ವಾಂತಮಂ ತಿದ್ದುತಿರು – ಮಂಕುತಿಮ್ಮ ॥ ೩೭೬ ॥

ಮುಕ್ತಿಯೆಂಬುದು ಮನದ ಸಂಸ್ಥಿತಿಯೆ, ಬೇರಲ್ಲ । ರಕ್ತಿ ವಿಪರೀತವದಕಾಗದಿರೆ ಮುಕ್ತಿ ॥ ಯುಕ್ತಿಯಿಂ ಕರಣಚೇಷ್ಟಿತವ ತಿದ್ದುತೆ ಶಮಿಪ । ಶಕ್ತಿವಂತನೆ ಮುಕ್ತ – ಮಂಕುತಿಮ್ಮ ॥ ೬೪೭ ॥

ಮೋಕ್ಷದಾಶೆಯೊಳಮತ್ಯಾತುರತೆಯೊಳಿತಲ್ಲ । ಶಿಕ್ಷೆ ಬಹುಕಾಲ ನಡೆಯದೆ ಮೋಕ್ಷವಿಲ್ಲ ॥ ಲಕ್ಷ್ಯ ತಪ್ಪದೆ ಚರಿಸು ಸಾಮಾನ್ಯಧರ್ಮಗಳ । ಮೋಕ್ಷ ಸ್ವತಸ್ಸಿದ್ದ- ಮಂಕುತಿಮ್ಮ ॥ ೯೦೩ ॥

ತತ್ತ್ವಸಾಕ್ಷಾತ್ಕಾರ ಚಿತ್ತಶುದ್ಧಿಯಿನಹುದು । ಚಿತ್ತಶೋಧನೆ ಮತಿಚಮತ್ಕಾರವಲ್ಲ ॥ ಬಿತ್ತರದ ಲೋಕಪರಿಪಾಕದಿಂ, ಸತ್ಕರ್ಮ । ಸಕ್ತಿಯಿಂ ಶುದ್ಧತೆಯೊ – ಮಂಕುತಿಮ್ಮ ॥ ೯೦೬ ॥

ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ । ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು ॥ ನೂನದಿಂದೆಲ್ಲವನುವಬ್ಧಿಯೊಳಗದನಿರಿಸೆ । ಮೌನವದು ಮಣ್ಕರಗಿ – ಮಂಕುತಿಮ್ಮ ॥ ೯೦೧ ॥

ತೆರೆಯಾಗು ವಿಶ್ವಜೀವನದ ದಿವ್ಯಾಬ್ಧಿಯಲಿ । ಕರಗಿಸದರಲಿ ನಿನ್ನ ಬೇರೆತನದರಿವ ॥ ಮರುತನುರುಬನು ತಾಳುತೇಳುತೋಲಾಡುತ್ತ । ವಿರಮಿಸಾ ಲೀಲೆಯಲಿ – ಮಂಕುತಿಮ್ಮ ॥ ೯೧೪ ॥

ಹೋರು ಧೀರತೆಯಿಂದ, ಮೊಂಡುತನದಿಂ ಬೇಡ । ವೈರ ಹಗೆತನ ಬೇಡ, ಹಿರಿ ನಿಯಮವಿರಲಿ ॥ ವೈರಾಗ್ಯ ಕಾರುಣ್ಯ ಮೇಳನವೆ ಧೀರತನ । ಹೋರುದಾತ್ತತೆಯಿಂದ – ಮಂಕುತಿಮ್ಮ ॥ ೫೭೪ ॥

ಮುನ್ನಾದ ಜನುಮಗಳ ನೆನಸಿನಿಂ ನಿನಗೇನು? । ಇನ್ನುಮಿಹುದಕೆ ನೀಡು ಮನವನ್; ಎನ್ನುವವೋಲ್ ॥ ಬೆನ್ನ ಪಿಂತಿನದು ಕಾಣಿಸದಂತೆ ಪರಮೇಷ್ಠಿ । ಕಣ್ಣನಿಟ್ಟನು ಮುಖದಿ – ಮಂಕುತಿಮ್ಮ ॥ ೭೬೦ ॥

ಲೋಚನದ ಸಂಚಾರ ಮುಖದ ಮುಂದಕಪಾರ । ಗೋಚರಿಪುದೇನದಕೆ ತಲೆಯ ಹಿಂದಣದು? ॥ ಪ್ರಾಚೀನ ಹೊರತು ಸ್ವತಂತ್ರ ನೀಂ, ಸಾಂತವದು । ಚಾಚು ಮುಂದಕೆ ಮನವ – ಮಂಕುತಿಮ್ಮ ॥ ೭೬೧ ॥

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು । ಗುರುತಿಸೊಳಿತಿರುವುದನು ಕೇಡುಗಳ ನಡುವೆ ॥ ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು । ಹರುಷಕದೆ ದಾರಿಯೆಲೊ – ಮಂಕುತಿಮ್ಮ ॥ ೭೫೯ ॥

ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ, ಮೊದಲು । ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ ॥ ಬಾಳನೀ ಜಗದ ಮಂತುವು ಕಡೆಯಲೇಳುವುದು । ಆಳದಿಂದಾತ್ಮಮತಿ – ಮಂಕುತಿಮ್ಮ ॥ ೬೧೫ ॥

ಧರಣಿಗೋಳವು ಮೂಸೆ; ಜೀವಗಳನದರೊಳಗೆ । ಪರಿಶುದ್ಧಿಗೊಳಿಸುವುದು ಸಂಸಾರತಾಪ ॥ ಪರಿಪರಿಯ ಬಂಧುಧರ್ಮದಿನ್ ಅಹಂಮತಿ ಕರಗೆ । ಹರಡಿ ಹಬ್ಬುವುದಾತ್ಮ – ಮಂಕುತಿಮ್ಮ ॥ ೬೦೩ ॥

ಕಾಷಾಯವೇಂ ತಪಸು ಗೃಹಲೋಕನಿರ್ವಾಹ । ವೇಷತಾಳದ ತಪಸು, ಕಠಿನತರ ತಪಸು ॥ ಲೇಸಿನಿಂದದು ಸಾಗೆ ಬೇಕು ಶಮ ದಮ ಸಮತೆ । ಆಸಿಧಾರವ್ರತವೊ – ಮಂಕುತಿಮ್ಮ ॥ ೬೧೨ ॥

ಮನೆಯೆ ಮಠವೆಂದು ತಿಳಿ, ಬಂಧು ಬಳಗವೆ ಗುರುವು । ಅನವರತಪರಿಚರ್ಯೆಯವರೊರೆವ ಪಾಠ ॥ ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ । ಮನಕೆ ಪುಟಸಂಸ್ಕಾರ – ಮಂಕುತಿಮ್ಮ ॥ ೬೧೧ ॥

ತ್ರಾಸಿನಲಿ ಕಪ್ಪೆಗಳ ಸರಿಕೂಡಿಸುವ ಚತುರಿ । ಸಂಸ್ಕೃತಿ ದ್ವಂದ್ವಗಳ ಸಮತೂಗಲರಿವಂ ॥ ಬೀಸುಕತ್ತಿಗಳ ಮಧ್ಯದಿ ನೂಲಮೇಲ್ ನಡೆವ । ಸಾಸವೀ ಗೃಹಧರ್ಮ – ಮಂಕುತಿಮ್ಮ ॥ ೬೦೬ ॥

ಉದರಶಿಖಿಯೊಂದುಕಡೆ, ಹೃದಯಶಿಖಿಯೊಂದುಕಡೆ । ಕುದಿಸದಿರೆ ಜೀವಶಿಲೆ ಮೃದುವಪ್ಪುದೆಂತು? ॥ ಬದುಕಿನುರಿಯಲಿ ಕರಗಿ ತಿಳಿಯಾಗದಿಹ ಜೀವ । ಪುದಿಯದಾತ್ಮಾರ್ಣವದಿ – ಮಂಕುತಿಮ್ಮ ॥ ೬೦೫ ॥

ಹೊಸಹೊಸಬನಾಗುವನನುಕ್ಷಣಂ ಮಾನವನು । ವಸುಧೆಯಾ ಮೂಸೆಯಲಿ ಪುಟಪಾಕವಾಂತು ॥ ರಸಮೂರ್ತಿಯಾಗುವನು ಜಗದಾತ್ಮಮತಿ ಬೆಳೆಯೆ । ಕಸವೆಲ್ಲ ಕಳೆದವನು – ಮಂಕುತಿಮ್ಮ ॥ ೬೦೪ ॥

ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ । ದುಡಿ ಕೈಯಿನಾದನಿತು; ಪಡು ಬಂದ ಪಾಡು ॥ ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು । ಬಿಡುಗಡೆಗೆ ದಾರಿಯದು – ಮಂಕುತಿಮ್ಮ ॥ ೭೨೯ ॥

ಪಿಡಿ ಗಳಿಸು ಭುಜಿಸೊಡೆಯನಾಗೆನ್ನುವುದು ಮೋಹ । ಕೊಡು ಸಲಿಸು ಸೇವೆಗೈಯೆನ್ನುವುದು ಕರುಣೆ ॥ ಬಿಡು ನೀನು ನಾನುಗಳ, ವಿಶ್ವಾತ್ಮಪದವನೀ- । ನಡರೆನ್ನುವುದು ಶಾಂತಿ – ಮಂಕುತಿಮ್ಮ ॥ ೪೫೬ ॥

ಬುದ್ಧಿಮಾತಿದು ನಿನಗೆ; ಸಿದ್ಧನಿರು ಸಕಲಕ್ಕಂ । ಎದ್ದು ಕುಣಿಯಲಿ ಕರ್ಮ; ದೈವ ನಿದ್ರಿಸಲಿ ॥ ಅದ್ಭುತಗಳರಿದಲ್ಲ; ಭವ್ಯಕ್ಕೆ ಹದ್ದಿಲ್ಲ । ಸಿದ್ಧನಾಗೆಲ್ಲಕಂ – ಮಂಕುತಿಮ್ಮ ॥ ೭೮೩ ॥

ಮುಳುಗದಿರು; ಜೀವನದ ತೆರೆಯ ಮೇಲೀಜುತಿರು । ಒಳಿತನಾಗಿಸು, ಕೊಡುತ ಕೊಳುತ ಸಂತಸವ ॥ ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು । ಮಿಳಿತನಿರು ವಿಶ್ವದಲಿ – ಮಂಕುತಿಮ್ಮ ॥ ೭೫೦ ॥

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ । ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ॥ ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು । ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ॥ ೬೦೦ ॥

ಒಲ್ಲೆನೆನದಿರು ಬಾಳನ್, ಒಲವದೇನೆನ್ನದಿರು । ಉಲ್ಲಾಸಕೆಡೆಮಾಡು ನಿನ್ನನಾದನಿತು ॥ ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ । ಎಲ್ಲಕಂ ಸಿದ್ಧನಿರು – ಮಂಕುತಿಮ್ಮ ॥ ೨೫೮ ॥

ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ? । ಸಂದರ್ಭ ಬರಲಿ, ಬಂದಾಗಳಾ ಚಿಂತೆ ॥ ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು । ಇಂದಿಗಿಂದಿನ ಬದುಕು – ಮಂಕುತಿಮ್ಮ ॥ ೬೮೧ ॥

ದಿವಸದಿಮ್ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ । ಭವಿಷಿಯವ ಚಿಂತಿಸದೆ ಬದುಕ ನೂಕುತಿರು ॥ ವಿವರಗಳ ಜೋಡಿಸುವ ಯಜಮಾನ ಬೇರಿಹನು । ಸವೆಸು ನೀಂ ಜನುಮವನು – ಮಂಕುತಿಮ್ಮ ॥ ೬೮೨ ॥

ಚಿಂತೆಸಂತಾಪಗಳು ಮನಸಿಗೆ ವಿರೇಚಕವೊ । ಸಂತಸೋತ್ಸಾಹಗಳೆ ಪಥ್ಯದುಪಚಾರ ॥ ಇಂತುಮಂತುಂ ನಡೆಯುತಿರುವುದಾತ್ಮ ಚಿಕಿತ್ಸೆ । ಎಂತಾದೊಡಂತೆ ಸರಿ – ಮಂಕುತಿಮ್ಮ ॥ ೬೪೫ ॥

ತಿರುಗಿಸಲಿ ವಿಧಿರಾಯನಿಚ್ಛೆಯಿಂ ಯಂತ್ರವನು । ಚರಿಕೆ ತಾರಾಗ್ರಹಗಳಿಷ್ಟವೋದಂತೆ ॥ ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ । ಸ್ಥಿರಚಿತ್ತ ನಿನಗಿರಲಿ – ಮಂಕುತಿಮ್ಮ ॥ ೫೯೯ ॥

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? । ವಿಹಿತವಾಗಿಹುದದರ ಗತಿ ಸೃಷ್ಟಿ ವಿಧಿಯಿಂ ॥ ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ । ಸಹನೆ ವಜ್ರದ ಕವಚ – ಮಂಕುತಿಮ್ಮ ॥ ೩೬೬ ॥

ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ । ಭಾನು ತಣುವಾದಾನು; ಸೋಮ ಸುಟ್ಟಾನು ॥ ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು । ಮೌನದಲಿ ಸಿದ್ಧನಿರು – ಮಂಕುತಿಮ್ಮ ॥ ೭೮೪ ॥

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ । ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ॥ ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು । ಮತ್ತೆ ತೋರ್ಪುದು ನಾಳೆ – ಮಂಕುತಿಮ್ಮ ॥ ೫೯೩ ॥

ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ । ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ॥ ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? । ಸತ್ರ ಹೊಸದಿಹುದು ನಡೆ – ಮಂಕುತಿಮ್ಮ ॥ ೮೩೫ ॥

ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು । ತಿಂದು ನಿನ್ನನ್ನಋಣ ತೀರುತಲೆ ಪಯಣ ॥ ಹಿಂದಾಗದೊಂದು ಚಣ, ಮುಂದಕುಂ ಕಾದಿರದು । ಸಂದ ಲೆಕ್ಕವದೆಲ್ಲ – ಮಂಕುತಿಮ್ಮ ॥ ೬೭೩ ॥

ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ । ತೊಟ್ಟಲಿಗೆ ಹಬ್ಬ ಮಸಣವು ತೇಗುತಿರಲು ॥ ಹುಟ್ಟಿದವರೆಲ್ಲ ಸಾಯದೆ ನಿಲ್ತೆ, ಹೊಸತಾಗಿ । ಹುಟ್ಟುವರ್ಗೆಡೆಯೆಲ್ಲಿ? – ಮಂಕುತಿಮ್ಮ ॥ ೬೭೪ ॥

ಜವನ ನಿಂದಿಪುದೇಕೆ ಸರ್ವಘಾತಕನೆಂದು? । ಭುವಿಗೆ ವೃದ್ಧಸಮೃದ್ಧಿಯನು ಸುಮ್ಮನಿರಲ್ ॥ ನವಜನಕ್ಕೆಡೆಯೆತ್ತಲಾರುಮೆಡೆಬಿಡದೆ ನಿಲೆ? । ನವತೆಯವನಿಂ ಜಗಕೆ – ಮಂಕುತಿಮ್ಮ ॥ ೪೦೨ ॥

ಕಾಲವಕ್ಷಯದೀಪವದರ ಪಾತ್ರೆಯಪಾರ । ಬಾಳ್ ಅದರಿನಾದೊಂದು ಕಿರುಹಣತೆ ಮಿಣಕು ॥ ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು । ತೈಲಧಾರೆಯಖಂಡ – ಮಂಕುತಿಮ್ಮ ॥ ೧೦೪ ॥

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು । ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ॥ ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ । ಸತತ ಕೃಷಿಯೋ ಪ್ರಕೃತಿ – ಮಂಕುತಿಮ್ಮ ॥ ೧೪೦ ॥

ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು । ಸಂದಿಹುದು ಚಿರನವತೆಯಶ್ವತ್ಥಮರಕೆ ॥ ಎಂದೆಂದುಮಂತಿರುವುದೀ ವಿಶ್ವವೃಕ್ಷವದ । ರೊಂದು ರೆಂಬೆಯೊ ನೀನು – ಮಂಕುತಿಮ್ಮ ॥ ೨೫೨ ॥

ಮರಣದಿಂ ಮುಂದೇನು? ಪ್ರೇತವೋ? ಭೂತವೋ? । ಪರಲೋಕವೋ? ಪುನರ್ಜನ್ಮವೊ? ಅದೇನೋ! ॥ ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ । ಧರೆಯ ಬಾಳ್ಗದರಿನೇಂ? – ಮಂಕುತಿಮ್ಮ ॥ ೮೪೬ ॥

ನೆಲದ ಬೇಸಾಯ ತಾನೊಳ್ಳಿತಾಗಿರೆ ನಿನಗೆ । ಫಲದೆಂತಹುದೆಂಬ ಶಂಕೆಗೆಡೆಯುಂಟೆ? ॥ ಒಳಿತರೊಳೆ ನೀಂ ಬಾಳು; ಪರವದೆಂತಿರ್ದೊಡೇಂ? । ಇಳೆಯೆ ಬಾಗಿಲು ಪರಕೆ – ಮಂಕುತಿಮ್ಮ ॥ ೮೪೭ ॥

ಅರಸನೊಬ್ಬನಲ್ಲ; ಮೂವರು ಬಾಳನಾಳುವರು । ನರ ಕರುಮ ದೈವಗಳು; ತೊಡಕದಕೆ ಸಾಜ ॥ ಗುರಿಯಿಡದ, ಮೊದಲು ಕೊನೆಯಿರದ, ದರಬಾರಿನಲಿ । ಸರಿಯೇನೊ ತಪ್ಪೇನೊ? – ಮಂಕುತಿಮ್ಮ ॥ ೧೪೯ ॥

ದೊರೆ ಮೂವರಿರುವಲ್ಲಿ ಸರಿಯಿಹುದೆ ಸೋಜಿಗವು । ಕೊರತೆ ಹೆಚ್ಚಿಕೆಗಳಿರಲಚ್ಚರಿಯದೇನು? ॥ ಬರಲಿ ಬರುವುದು; ಸರಿವುದೆಲ್ಲ ಸರಿಯಲಿ; ನಿನಗೆ । ಪರಿವೆಯೇನಿಲ್ಲೆಲವೊ – ಮಂಕುತಿಮ್ಮ ॥ ೧೫೦ ॥

ಜೀವನವ್ಯಾಪಾರ ಮೂವರೊಟ್ಟು ವಿಚಾರ । ಭಾವಿಪೊಡೆ ನೀನು, ಜಗ, ಇನ್ನೊಂದದೃಷ್ಟ ॥ ಆವಗಂ ಮೂರನೆಯ ಭಾಗಸ್ಥನಿಚ್ಛೆ ಬಲ । ಈ ವಿವರವರಿಯೆ ಸುಖ – ಮಂಕುತಿಮ್ಮ ॥ ೮೨೦ ॥

ಇನ್ನೇನು ಮತ್ತೇನು ಗತಿಯೆಂದು ಬೆದರಿದರು । ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ॥ ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು । ತಣ್ಣಾಗಿರಿಸಾತ್ಮವನು – ಮಂಕುತಿಮ್ಮ ॥ ೩೬೦ ॥

ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ? । ಹೊದಿಸುವುದು ದೈವವೆಲ್ಲಕಮೊಂದು ತೆರೆಯ ॥ ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು । ವಿಧಿಯ ಬಗೆಯೆಂತಿಹುದೋ! – ಮಂಕುತಿಮ್ಮ ॥ ೩೬೫ ॥

ಎಲ್ಲಕಂ ನಿನಗಿಲ್ಲ ಕರ್ತವ್ಯದಧಿಕಾರ । ಇಲ್ಲದೆಯುಮಿಲ್ಲ ನಿನಗಾ ಹೊರೆಯ ಪಾಲು ॥ ಸಲ್ಲಿಸಾದನಿತ, ಮಿಕ್ಕುದು ಪಾಲಿಗನ ಪಾಡು। ಒಲ್ಲನವನ್ ಅರೆನಚ್ಚ – ಮಂಕುತಿಮ್ಮ ॥ ೫೮೪ ॥

ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ? । ಓಲೆಗಳನವರವರಿಗೈದಿಸಿರೆ ಸಾಕು ॥ ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ! । ಕಾಲೋಟವವನೂಟ – ಮಂಕುತಿಮ್ಮ ॥ ೭೨೭ ॥

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ । ಕೊರತೆಯೊಂದನು ನೀನು ನೆನೆನೆನೆದು ಕೆರಳಿ ॥ ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ । ನರಳುವುದು ಬದುಕೇನೊ? – ಮಂಕುತಿಮ್ಮ ॥ ೬೪೪ ॥

ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು । ಅಸಮಂಜಸದಿ ಸಮನ್ವಯ ಸೂತ್ರ ನಯವ ॥ ವೆಸನಮಯ ಸಂಸಾರದಲಿ ವಿನೋದವ ಕಾಣ್ಬ । ರಸಿಕತೆಯೆ ಯೋಗವಲೊ – ಮಂಕುತಿಮ್ಮ ॥ ೨೪೧ ॥

ಗುಡಿಯ ಪೂಜೆಯೊ, ಕಥೆಯೊ, ಸೊಗಸುನೋಟವೊ, ಹಾಡೊ । ಬಡವರಿಂಗುಪಕೃತಿಯೊ, ಆವುದೋ ಮನದ ॥ ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ । ಬಿಡುಗಡೆಯೊ ಜೀವಕ್ಕೆ – ಮಂಕುತಿಮ್ಮ ॥ ೮೩೨ ॥

ದೇವಮಂದಿರ ಭಜನೆ ಪೂಜೆ ಪ್ರಸಾದಗಳು । ಜೀವನದಲಂಕಾರ, ಮನಸಿನುದ್ಧಾರ ॥ ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- । ದಾವುದಾದೊಡಮೊಳಿತು – ಮಂಕುತಿಮ್ಮ ॥ ೪೯೯ ॥

ಬಹಿರಂತರೈಕ್ಯವನು ನೆನಪಿಗಾಗಿಸಲೆಂದು । ವಿಹಿತಮ್ ಆಚಮನಾರ್ಘ್ಯ ಪೂಜೆ ನೈವೇದ್ಯ ॥ ಗುಹೆಯೊಳಗಣದ ಹೊರಗಣದ ಕೂಡಿಸುವುಪಾಯ । ಸಹಭಾವವದಕೆ ಸರಿ – ಮಂಕುತಿಮ್ಮ ॥ ೪೯೨ ॥

ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ । ಸೋಮಶಂಕರನೆ ಭೈರವ ರುದ್ರನಂತೆ ॥ ಹೈಮವತಿ ಶಿವೆ ತಾನೆ ಕಾಳಿ ಚಂಡಿಕೆಯಂತೆ । ಪ್ರೇಮ ಘೋರಗಳೊಂದೆ! – ಮಂಕುತಿಮ್ಮ ॥ ೯೫ ॥

ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ । ನಂಬಿಯುಂ ನಂಬದಿರುವಿಬ್ಬಂದಿ ನೀನು ॥ ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು । ಸಿಂಬಳದಿ ನೊಣ ನೀನು – ಮಂಕುತಿಮ್ಮ ॥ ೪೮೫ ॥

ಬಹುಜನಂ ಕೈಮುಗಿದ ತೀರ್ಥದೊಳ್ ಕ್ಷೇತ್ರದೊಳ್ । ಮಹಿಮೆಯಲ್ಲೇನೆಂದು ಸಂಶಯಿಸಬೇಡ ॥ ವಿಹಿತಗೈದವರಾರು ವಸತಿಂ ದೈವಕ್ಕೆ? । ಮಹಿಮೆ ಮನಸೋತೆಡೆಯೊ – ಮಂಕುತಿಮ್ಮ ॥ ೪೯೩ ॥

ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತೆತ್ತಲುಂ । ಮೂಲೆಮೂಲೆಯಲಿ ವಿದ್ಯುಲ್ಲಹರಿಯೊಂದು ॥ ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ । ಚಾಲಿಪುದು ಬಿಡು ಕೊಡದೆ – ಮಂಕುತಿಮ್ಮ ॥ ೪೩ ॥

ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ । ಎತ್ತಲೋ ಸಖನೊರ್ವನಿಹನೆಂದು ನಂಬಿ ॥ ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು । ಭಕ್ತಿಯಂತೆಯೆ ನಮದು – ಮಂಕುತಿಮ್ಮ ॥ ೪೮೪ ॥

ದೈವಕೃಪೆಯೆನುವುದೇಂ? ಪರಸತ್ತ್ವನವವೃಷ್ಟಿ । ಜೀವಗುಣ ಪಕ್ವಪಟ್ಟಂತದರ ವೇಗ ॥ ಭಾವಚೋದನೆಗಳಲಿ ಬಾಹ್ಯಸಾಧನೆಗಳಲಿ । ತೀವಿ ದೊರೆಕೊಳುವುದದು – ಮಂಕುತಿಮ್ಮ ॥ ೫೦೫ ॥

ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿ । ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ॥ ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ । ಮುಗಿಲವೊಲು ದೈವಕೃಪೆ – ಮಂಕುತಿಮ್ಮ ॥ ೫೦೪ ॥

ಆವ ಋಣಕೋಸುಗವೊ, ಆರ ಹಿತಕೋಸುಗವೊ । ಆವಾವ ಕಾರಣಕೊ, ಆವ ಯೋಜನೆಗೋ ॥ ನೋವ ನೀಂ ಪಡುವುದೇ ದೈವೇಚ್ಛೆಯಾಗಿರದೆ? । ದೈವ ಕುರುಡೆನ್ನದಿರು – ಮಂಕುತಿಮ್ಮ ॥ ೫೧೨ ॥

ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು । ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ॥ ಬೇಸರದ ಪಾತಕಸ್ಮೃತಿಯ ಚುಚ್ಚದಿರ್: ಎನ್ನು- । ತೀಶನನು ಬೇಡುತಿರೊ – ಮಂಕುತಿಮ್ಮ ॥ ೭೯೨ ॥ ಬೇಡಿದುದನೀವನೀಶ್ವರನೆಂಬ ನೆಚ್ಚಿಲ್ಲ । ಬೇಡಲೊಳಿತಾವುದೆಂಬುದರರಿವುಮಿಲ್ಲ ॥ ಕೂಡಿಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ । ನೀಡುಗೆದೆಗಟ್ಟಿಯನು – ಮಂಕುತಿಮ್ಮ ॥ ೯೪೩ ॥

ಮನೆಯ ಸಂಸಾರದಲಿ ವಾಸವಿರುತಾಗಾಗ । ನೆನೆದು ನೀಂ ದೇಗುಲಕೆ ಪೋಗಿಬರುವಂತೆ ॥ ದಿನವೆಲ್ಲ ದೇವಸನ್ನಿಧಿಯೊಳಿರುತಾಗಾಗ । ಮನೆಗೆ ಬರುವನವೊಲಿರು – ಮಂಕುತಿಮ್ಮ ॥ ೭೦೨ ॥

ಎನಿತು ನೀಂಗೆಲಿದೆಯೆಂದೆನರು ಬಲ್ಲವರೆಂದು- । ಮೆನಿತು ನೀಂ ಪೋರ್ದೆ ಯೆನಿತನು ಪೊತ್ತೆಯೆನುವರ್ ॥ ಗಣನೆ ಸಲುವುದು ತೋರ್ದ ಪೌರುಷಕೆ, ಜಯಕೆಲ್ಲ । ದಿನದಿನದ ಗರಡಿಯಿದು – ಮಂಕುತಿಮ್ಮ ॥ ೫೯೫ ॥

ಸೈನಕನು ನೀನು, ಸೇನಾಧಿಪತಿಯೆಲ್ಲಿಹನೊ! । ಆಣತಿಯ ಕಳುಹುತಿಹನದನು ನೀನರಿತು ॥ ಜಾಣಿನಧಟಿಂ ಪೋರು; ಸೋಲುಗೆಲುವವನೆಣಿಕೆ । ಕಾಣಿಸದನಾಳ್ಕೆಯದು – ಮಂಕುತಿಮ್ಮ ॥ ೭೩೪ ॥

ಅಳಬೇಕು, ನಗಬೇಕು, ಸಮತೆ ಶಮವಿರಬೇಕು । ಹೊಳೆಯ ನೆರೆವೊಲು ಹೃದಯರಸ ಹರಿಯಬೇಕು ॥ ಅಲೆಯಿನಲುಗದ ಬಂಡೆಯವೊಲಾತ್ಮವಿರಬೇಕು । ತಿಳಿದವರ ಚರಿತವದು – ಮಂಕುತಿಮ್ಮ ॥ ೮೧೨ ॥

ನಾಸಿಕದೊಳುಚ್ಛ್ವಾಸ ನಿಶ್ವಾಸ ನಡೆವಂತೆ । ಸೂಸುತ್ತಲಿರಲಿ ನಿನ್ನಿರವು ಮಂಗಳವ ॥ ಆಶಿಸದೆ ಸಂಕಲ್ಪಯತ್ನಗಳನಿನಿತುಮಂ । ಸಾಜವಾಗಲಿ ಸಯ್ಪು – ಮಂಕುತಿಮ್ಮ ॥ ೭೧೨ ॥

ಕ್ಷಣದಿಂದನುಕ್ಷಣಕೆ, ದಿನದಿಂದ ಮರುದಿನಕೆ । ಅನಿತನಿತರೊಳೆ ಬದುಕುತಾಯುವನು ಕಳೆವಾ ॥ ಮನದ ಲಘುಸಂಚಾರವೊಂದು ಯೋಗದುಪಾಯ । ಶುನಕೋಪದೇಶವದು – ಮಂಕುತಿಮ್ಮ ॥ ೭೬೭ ॥

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು । ನೆನೆಯದಿನ್ನೊಂದನೆಲ್ಲವ ನೀಡುತದರಾ ॥ ಅನುಸಂಧಿಯಲಿ ಜೀವಭಾರವನು ಮರೆಯುವುದು । ಹನುಮನುಪದೇಶ – ಮಂಕುತಿಮ್ಮ ॥ ೭೬೬ ॥

ತನ್ನ ರುಚಿ ರಾಮರುಚಿ; ತನ್ನ ಸಂತುಷ್ಟಿ ಪರಿ- । ಪೂರ್ಣವಪ್ಪುದು ರಾಮಸಂತುಷ್ಟಿಯಿಂದೆ ॥ ಎನ್ನುವಾ ಸಾಜಾದಾ ದೈವಾತ್ಮಭಾವದಲಿ । ಧನ್ಯಳಾದಳು ಶಬರಿ – ಮಂಕುತಿಮ್ಮ ॥ ೭೬೫ ॥

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ । ಮೇರುವನು ಮರೆತಂದೆ ನಾರಕಕೆ ದಾರಿ ॥ ದೂರವಾದೊಡದೇನು? ಕಾಲು ಕುಂಟಿರಲೇನು? । ಊರ ನೆನಪೇ ಬಲವೊ – ಮಂಕುತಿಮ್ಮ ॥ ೭೬೨ ॥

ಶರಧಿಯನೀಜುವನು, ಸಮರದಲಿ ಕಾದುವನು । ಗುರಿಯೊಂದನುಳಿದು ಪೆರತೊಂದ ನೋಡುವನೆ? ॥ ಮರೆಯುವನು ತಾನೆಂಬುದನೆ ಮಹಾವೇಶದಲಿ । ನಿರಹಂತೆಯದು ಮೋಕ್ಷ – ಮಂಕುತಿಮ್ಮ ॥ ೬೯೬ ॥

ಮೇರುಪರ್ವತಕಿಹುವು ನೂರೆಂಟು ಶಿಖರಗಳು । ದಾರಿ ನೂರಿರಬಹುದು, ನಿಲುವ ಕಡೆ ನೂರು ॥ ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ । ಮೇರುಸಂಸ್ಮೃತಿಯೆ ಬಲ – ಮಂಕುತಿಮ್ಮ ॥ ೭೬೩ ॥

ಗತಿಯೇನು ಎನಗೆನುತ ಕೇಳ್ವವರೆ ಎಲ್ಲರುಂ । ಹಿತವೆಂತು ಜಗಕೆಂದು ಕೇಳುವವರಾರು? ॥ ಮತಿಯ ವಿಶ್ವದಿ ಬೆರಸಿ ಜೀವಿತವ ವಿಸ್ತರಿಸೆ । ಪಥ ಮುಕ್ತಿಗಾಗಳೇ – ಮಂಕುತಿಮ್ಮ ॥ ೭೬೮ ॥

ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ । ಸತ್ರದಲಿ ನೇಮದಿಂದಿರಲಿಕೆಡೆಯುಂಟು ॥ ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ, ಪಾರು- । ಪತ್ಯದವ ಮೆಚ್ಚುವನು – ಮಂಕುತಿಮ್ಮ ॥ ೬೭೨ ॥

ಇಳೆಯಿಂದ ಮೊಳಕೆಯೊಗವಂದು ತಮಟೆಗಳಿಲ್ಲ । ಫಲ ಮಾಗುವಂದು ತುತ್ತೂರಿ ದನಿಯಿಲ್ಲ ॥ ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ । ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ ॥ ೬೬೧ ॥

ಖದ್ಯೋತನಂತೆ ಬಿಡುಗೊಳದೆ ಧರ್ಮವ ಚರಿಸು । ವಿದ್ಯುಲ್ಲತೆಯ ತೆರದಿ ತೇಜಗಳ ಸೂಸು ॥ ಗೆದ್ದುದೇನೆಂದು ಕೇಳದೆ, ನಿನ್ನ ಕೈಮೀರೆ । ಸದ್ದುಮಾಡದೆ ಮುಡುಗು – ಮಂಕುತಿಮ್ಮ ॥ ೬೬೨ ॥

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು । ದೊರತುದ ಹಸಾದವೆಂದುಣ್ಣು ಗೊಣಗಿಡದೆ ॥ ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ । ಹೊರಡು ಕರೆ ಬರಲ್ ಅಳದೆ – ಮಂಕುತಿಮ್ಮ ॥ ೬೦೧ ॥

ಅಂದಿಗಂದಿನ ಕೆಲಸ, ಸಂದನಿತರಲಿ ತೃಪ್ತಿ । ಕುಂದದುಬ್ಬದ ಮನಸು ಬಂದುದೇನಿರಲಿ ॥ ಬಂಧು ಮತಿ ಲೋಕದಲಿ, ಮುನ್ ದೃಷ್ಟಿ ಪರಮದಲಿ । ಹೊಂದಿರಲಿವದು ಪುಣ್ಯ – ಮಂಕುತಿಮ್ಮ ॥ ೭೮೨ ॥

ದೊರೆವ ಜೀತಕೆ ದುಡಿತ, ಮರುದಿನದ ಚಿಂತೆ ಮಿತ । ಹೊರೆಯ ಹಗುರಾಗಿಸುವ ಕೆಳೆಯರೊಡನಾಟ ॥ ಸರಳತೆಯ ಪರಿತುಷ್ಟಿ, ಪರಮಾರ್ಥ ದೃಷ್ಟಿಯಿವು । ಸರಿಗೂಡೆ ಸುಕೃತವದು – ಮಂಕುತಿಮ್ಮ ॥ ೭೭೯ ॥

ಆವ ಜೀವದ ಪಾಕವಾವನುಭವದಿನಹುದೊ! । ಆವ ಪಾಪಕ್ಷಯವದಾವ ಪುಣ್ಯದಿನೋ! ॥ ಕಾವಿರದೆ ಪಕ್ವವಿಹ ಜೀವವಿಳೆಯೊಳಗಿರದು । ನೋವೆಲ್ಲ ಪಾವಕವೊ – ಮಂಕುತಿಮ್ಮ ॥ ೬೦೯ ॥

ಅಂತರಂಗದ ಗವಾಕ್ಷಗಳ ತೆರೆದಿಡಲಲ್ಲಿ । ಚಿಂತೆ ಕುಮುಲದು, ಹೊಗೆಗಳೊತ್ತವಾತ್ಮವನು ॥ ಶಾಂತಿ ಬೇಳ್ಪೊಡೆ ಮನೆಗೆ ಗೋಡೆವೊಲೆ ಕಿಟಿಕಿಯುಂ । ಸಂತತದಪೇಕ್ಷಿತವೊ – ಮಂಕುತಿಮ್ಮ ॥ ೫೫೭ ॥

ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ । ನಿಜಕುಕ್ಷಿ ಚಿಂತೆಯೇಂ ಮೊದಲು ಮನೆತಾಯ್ಗೆ? ॥ ಭುಜಿಪ ಪತಿಸುತರೊಪ್ಪು ತುಪ್ಪವವಳೂಟಕ್ಕೆ । ಭಜಿಸು ನೀನಾ ವ್ರತವ- ಮಂಕುತಿಮ್ಮ ॥ ೯೦೮ ॥

ತಿರುಕ ನೀನೀ ಬ್ರಹ್ಮಪುರಿಯೊಳದ ಮರೆಯದಿರು । ಸಿರಿಯಿರ್ದೊಡೇನು? ಪರಿಜನವಿರ್ದೊಡೇನು? ॥ ತೊರೆದೆಲ್ಲ ಡಂಭಗಳ ನೀನೆ ನಿನ್ನಾಳಾಗು । ಪರದೇಶಿವೊಲು ಬಾಳು – ಮಂಕುತಿಮ್ಮ ॥ ೬೪೦ ॥

ಒಮ್ಮನಸಿನಿಂದ ನೀನೀ ತತ್ತ್ವವಂ ಗ್ರಹಿಸು । ಬ್ರಹ್ಮಲೀಲೆಗೆ ಗೊತ್ತುಗುರಿ ಲೆಕ್ಕವಿಲ್ಲ ॥ ಸುಮ್ಮನಿರು ನಿನ್ನ ಪಾಡನು ಪಡುತ ತುಟಿ ಬಿಗಿದು । ನೆಮ್ಮದಿಗೆ ದಾರಿಯದು – ಮಂಕುತಿಮ್ಮ ॥ ೮೪೯ ॥

ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ । ಧರ್ಮಸಂಕಟಗಳಲಿ, ಜೀವಸಮರದಲಿ ॥ ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ । ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ॥ ೬೮೯ ॥

ವೈವಿಧ್ಯವೊಂದುಕೃಪೆ ನಮಗಿರುವ ಕಷ್ಟದಲಿ । ಆವರಿಸದಳಲ್ ಎಲ್ಲರನುಮೊಂದೆ ಸಮಯ ॥ ನೋವಿಲ್ಲದರು ನೊಂದವರನು ಸಂತಯಿಸುತಿರೆ । ಜೀವನವು ಕಡಿದಹುದೆ? – ಮಂಕುತಿಮ್ಮ ॥ ೬೨೯ ॥

ಎಡವದೆಯೆ, ಮೈಗಾಯವಡೆಯದೆಯೆ, ಮಗುವಾರು । ನಡೆಯ ಕಲಿತವನು? ಮತಿನೀತಿಗತಿಯಂತು ॥ ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- । ದಡವಿಕೊಳುವವರೆಲ್ಲ – ಮಂಕುತಿಮ್ಮ ॥ ೬೯೮ ॥

ಏಸು ಸಲ ತಪಗೈದುದೇಸು ಬನ್ನವನಾಂತು । ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್? ॥ ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ । ಲೇಸಾಗಿಸಾತ್ಮವನು – ಮಂಕುತಿಮ್ಮ ॥ ೬೯೯ ॥

ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು । ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ? ॥ ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ । ಗಟ್ಟಿತನ ಗರಡಿ ಫಲ – ಮಂಕುತಿಮ್ಮ ॥ ೫೮೮ ॥

ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? । ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ ॥ ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ । ತಾಳುಮೆಯೆ ಪರಿಪಾಕ – ಮಂಕುತಿಮ್ಮ ॥ ೭೮೧ ॥

ತರಿದುಬಿಡು, ತೊರೆದುಬಿಡು, ತೊಡೆದುಬಿಡು ನೆನಹಿಂದ । ಕರೆಕರೆಯ ಬೇರುಗಳ, ಮನದ ಗಂಟುಗಳ ॥ ಉರಕೆ ಸೊಗಸೆನಿಸಿದಾ ಪ್ರೀತಿಹಾರಮುಮೊರ್ಮೆ । ಉರುಳಪ್ಪುದಾತ್ಮಕ್ಕೆ – ಮಂಕುತಿಮ್ಮ ॥ ೬೪೮ ॥

ತನುರುಜೆಗೆ ಪಥ್ಯಾನ್ನ, ಬಾಯ ಚಪಲಕ್ಕಲ್ಲ । ಮನದ ಶಿಕ್ಷೆ ಲೋಕ, ಮಮಕಾರಕಲ್ಲ ॥ ಗುಣಚರ್ಯೆ ವಿಶ್ವಸಮರಸಕೆ, ಕಾಮಿತಕಲ್ಲ । ಮುನಿವೃತ್ತಿ ಸೂತ್ರವಿದು – ಮಂಕುತಿಮ್ಮ ॥ ೯೦೭ ॥

ಸಮತೆಸಂಯಮಶಮಗಳಿಂ ಭವವನೋಲಗಿಸೆ । ಸಮನಿಪುದು ಮತಿಯ ಹದವಾತ್ಮಾನುಭವಕೆ ॥ ಮಮತೆಯಳಿವಿಂ ಜ್ಞಾನ; ಪಾಂಡಿತ್ಯದಿಂದಲ್ಲ । ಶ್ರಮಿಸಿಳೆಯ ಗಾಣದಲಿ – ಮಂಕುತಿಮ್ಮ ॥ ೭೦೪ ॥

ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೊ । ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ? ॥ ನಿನ್ನೊಡಲೆ ಚಿತೆ, ಜಗದ ತಂಟೆಗಳೆ ಸವುದೆಯುರಿ । ಮಣ್ಣೆ ತರ್ಪಣ ನಿನಗೆ – ಮಂಕುತಿಮ್ಮ ॥ ೭೧೭ ॥

ತನ್ನ ಶಿಲುಬೆಯ ತಾನೆ ಹೊತ್ತನಲ ಗುರು ಯೇಸು? । ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು ॥ ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು । ಬೆನ್ನಿನಲಿ ಹೊತ್ತು ನಡೆ – ಮಂಕುತಿಮ್ಮ ॥ ೭೧೮ ॥

ಆವುದಿರುವಿಕೆಗಾದಿ? ಎಂದು ಸೃಷ್ಟಿಯ ಮೊದಲು? । ಆವುದಬ್ಧಿಯ ತೆರೆಗಳಲಿ ಮೊಟ್ಟಮೊದಲು? ॥ ಆವುದೆಲರಿನ ನಿಲ್ಲದಲೆತಕ್ಕೆ ಪಡುಸೀಮೆ? । ಈ ವಿಶ್ವಕಥೆಯಂತು – ಮಂಕುತಿಮ್ಮ ॥ ೯೦ ॥

ಆದಿದಿವಸವದಾವುದೆಂದೆಂದುಮಿಹ ಜಗಕೆ? । ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ॥ ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ । ಸೇದಿಕೊಂಡಿರೆ ಲಯವೊ – ಮಂಕುತಿಮ್ಮ ॥ ೮೯ ॥

ಸೃಷ್ಟಿಕಥೆ ಕಟ್ಟುಕಥೆ; ವಿಲಯಕಥೆ ಬರಿಯ ಕಥೆ । ಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆ ॥ ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ । ಸತ್ಯ ಜಗದಲಿ ಕಾಣೊ – ಮಂಕುತಿಮ್ಮ ॥ ೧೩೯ ॥

ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ- । ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು ॥ ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ । ನೊರೆ ಸೃಷ್ಟಿ ಪಾಲ್ ಬ್ರಹ್ಮ – ಮಂಕುತಿಮ್ಮ ॥ ೭೫ ॥

ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು । ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ ॥ ಹಳೆಯವಿವು ನೀನದರೊಳಾವುದನು ಕಳೆದೀಯೊ? । ಹಳದು ಹೊಸತರೊಳಿರದೆ? – ಮಂಕುತಿಮ್ಮ ॥ ೧೪೧ ॥

ರಾಮನಡಿಯಿಟ್ಟ ನೆಲ,ಭೀಮನುಸಿರಿದ ಗಾಳಿ । ವ್ಯೋಮದೆ ಭಗೀರಥಂ ತಂದ ಸುರತಟಿನಿ ॥ ಸೋಮನಂ ಪೆತ್ತ ಕಡಲೀ ಪುರಾತನಗಳಿರೆ । ನಾಮೆಂತು ಹೊಸಬರೆಲೊ – ಮಂಕುತಿಮ್ಮ ॥ ೧೩೦ ॥

ಮಾಯೆಯೆಂಬಳ ಸೃಜಿಸಿ, ತಾಯನಾಗಿಸಿ ಜಗಕೆ । ಆಯಸಂಗೊಳುತ ಸಂಸಾರಿಯಾಗಿರುವ ॥ ನಾಯಕ ಬ್ರಹ್ಮನ್ ಅನುಯಾಯಿಗಳು ನಾವೆಲ್ಲ । ಹೇಯವದರೊಳಗೇನೊ – ಮಂಕುತಿಮ್ಮ ॥ ೬೦೨ ॥

ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು । ಹೊಮ್ಮುವೆನು ಕೋಟಿರೂಪದಲಿ ನಾನೆಂದು ॥ ಬೊಮ್ಮನೆಳಸಿದನಂತೆ. ಆ ಯೆಳಸಿಕೆಯೆ ಮಾಯೆ । ನಮ್ಮಿರವು ಮಾಯೆಯಲಿ – ಮಂಕುತಿಮ್ಮ ॥ ೭೪ ॥

ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ । ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲಸಿ ॥ ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ । ವಿಹರಿಪನು ನಿರ್ಲಿಪ್ತ! – ಮಂಕುತಿಮ್ಮ ॥ ೭೬ ॥

ಮರೆತಿಹನೆ ಬೊಮ್ಮ? ಮರೆತಿಲ್ಲ; ಮರೆತವೊಲಿಹನು । ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ॥ ಅರಸಿಕೊಳುವವೊಲಿಹುದು; ದೊರೆತವೊಲ್ ತೋರೆ ಸುಖ । ದೊರೆವವರೆಗಾಯಸವೊ – ಮಂಕುತಿಮ್ಮ ॥ ೮೧ ॥

ಏಕದಿಂದಲನೇಕ ಮತ್ತನೇಕದಿನೇಕ । ವೀ ಕ್ರಮವೆ ವಿಶ್ವದಂಗಾಂಗಸಂಬಂಧ ॥ ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ । ಸಾಕಲ್ಯದರಿವಿರಲಿ – ಮಂಕುತಿಮ್ಮ ॥ ೧೩೪ ॥

ಮೂಲವಸ್ತುವದೊಂದು ಲೀಲೆಗೋಸುಗ ನೂರು । ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ॥ ಸ್ಥೂಲವಿವಿಧದಿ ಬಾಳಿ ಸೂಕ್ಷ್ಮಸಾಮ್ಯವ ತಾಳಿ । ಆಳುತಿರು ಜೀವನವ – ಮಂಕುತಿಮ್ಮ ॥ ೧೪೨ ॥

ಕೇಳಿಯುಂ ಮಾಯೆಯದು; ನೃತ್ಯಗತಿ ಬರಿತೋರ್ಕೆ । ಮೂಲಮಂ ಕಂಡಂಗೆ ಸಂಭ್ರಾಂತಿಯೇನು? ॥ ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ । ಲೀಲಾಪ್ರಿಯಂ ಬ್ರಹ್ಮ – ಮಂಕುತಿಮ್ಮ ॥ ೯೪ ॥

ಮಾಯೆಯೇ ಸರಸಿ; ನಿರ್ಗುಣ ಸತ್ತ್ವದಿಂದೇನು? । ಮಾಯೆ ಬಿಡೆ ಜಗವೆತ್ತ? ಜೀವಕಥೆಯೆತ್ತ? ॥ ಮೇಯವಲ್ಲದ ಮಹಿಮೆ ಛಾಯೆಯಾ ಬ್ರಹ್ಮನದು । ತಾಯವಳು ನೀಂ ಮಗುವು – ಮಂಕುತಿಮ್ಮ ॥ ೧೪೫ ॥

ದೃಶ್ಯವೆಲ್ಲವು ನಶ್ಯವಾದೊಡೇಂ? ದೃಷ್ಟಿಗದು । ವಶ್ಯವಿರುವನಕದನು ದೃಷ್ಟಿಪುದೆ ಕಾರ್ಯಂ ॥ ವಿಶ್ವಾನುಭವವೆ ವಿಶ್ವಾತ್ಮಾನುಭವಕೆ ಪಥ । ನಶ್ಯದಿಂದವಿನಶ್ಯ – ಮಂಕುತಿಮ್ಮ ॥ ೪೦೦ ॥

ಕನಸು ದಿಟ; ನೆನಸು ದಿಟ; ತನುವೊಳಿಹ ಚೇತನವ । ಕನಲಿಸುವ ಕುಣಿಸುವಾ ಹಬೆಗಳೆಲ್ಲ ದಿಟ ॥ ಇನಿತನಿತು ದಿಟಗಳಿವು-ತುಂಬುದಿಟದಂಶಗಳು । ಗಣನೀಯವವು ಬಾಳ್ಗೆ – ಮಂಕುತಿಮ್ಮ ॥ ೩೯೪ ॥

ತುಂಬುದಿಟ ಜೀವಿತದ ಗಣನೆಗಳ ಮೀರಿದುದು । ಇಂಬುಗಳ ಬಿಂಬಗಳ ಸನ್ನಿಧಾನವದು ॥ ಅಂಬರದಿನಾಚಿನದು, ತುಂಬಿರುವುದೆತ್ತಲುಂ । ಶಂಭು ಪರಬೊಮ್ಮನದು – ಮಂಕುತಿಮ್ಮ ॥ ೩೯೫ ॥

ನಾನೆಂಬುದೊಂದಂಶವಿತರ ಜಗವೊಂದಂಶ । ನಾನು ನೀನುಗಳಳಿದ ಸರ್ವೈಕ್ಯವೊಂದು ॥ ಧ್ಯಾನಿಸುತ್ತೈಕ್ಯವನು ಪಾಲಿಸುವುದುಭಯವನು । ಜಾಣಿನಾ ನಾಟಕವೊ – ಮಂಕುತಿಮ್ಮ ॥ ೭೯೩ ॥

ನಭದ ಬಯಲೊಳನಂತ, ಮನದ ಗುಹೆಯೊಳನಂತ । ವುಭಯದಾ ನಡುವೆ ಸಾದ್ಯಂತ ಜೀವಕಥೆ ॥ ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು । ಹಬೆಗುಳ್ಳೆಯೋ ಸೃಷ್ಟಿ – ಮಂಕುತಿಮ್ಮ ॥ ೮೫ ॥

ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ । ಬಚ್ಚಿಡುವುದದನು ಜೀವಿತೆಯ ಮಾಯಿಕತೆ॥ ಇಕ್ಷುವೊಲ್ ಜೀವ; ಗಾಣದವೊಲ್ ಜಗನ್ಮಾಯೆ । ನಿಚ್ಚವಿಳೆಯಾಲೆಮನೆ – ಮಂಕುತಿಮ್ಮ ॥ ೧೨೫ ॥

ಜಗದೀ ಜಗತ್ತ್ವವನು, ಮಾಯಾವಿಚಿತ್ರವನು । ಒಗೆದಾಚೆ ಬಿಸುಡೆಲ್ಲ ಕರಣವೇದ್ಯವನು ॥ ಮಿಗುವುದೇಂ? ರೂಪಾಖ್ಯೆಯೊಂದುಮಿಲ್ಲದ ವಸ್ತು । ಹೊಗಿಸಾ ಕಡೆಗೆ ಮತಿಯ – ಮಂಕುತಿಮ್ಮ ॥ ೮೯೯ ॥

ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ । ಪ್ರತ್ಯೇಕ ಜೀವದಶೆಯವನಂಗಭಂಗಿ ॥ ಸತ್ಯಸತ್ತ್ವಜ್ವಾಲೆ ವಿಶ್ವಮಾಯಾಲೀಲೆ । ಪ್ರತ್ಯಗಾತ್ಮನು ನೀನು – ಮಂಕುತಿಮ್ಮ ॥ ೮೫೦ ॥

ಕಣ್ದೆರೆದು ನೋಡು, ಚಿತ್ಸತ್ತ್ವಮೂರ್ತಿಯ ನೃತ್ಯ । ಕಣ್ಮುಚ್ಚಿ ನೋಡು, ನಿಶ್ಚಲ ಶುದ್ಧ ಸತ್ತ್ವ ॥ ಉನ್ಮುಖನು ನೀನೆರಡು ಜಗಕವಿರುತಿರಲಾಗ । ಹೃನ್ಮಧ್ಯದಲಿ ಶಾಂತಿ – ಮಂಕುತಿಮ್ಮ ॥ ೮೫೧ ॥

ಬ್ರಹ್ಮಾನುಸಂಧಾನ ಲೋಕಸಂಧಾನದಲಿ । ಬ್ರಹ್ಮದರ್ಶನವೆಲ್ಲ ಜೀವರೂಪದಲಿ ॥ ಬ್ರಹ್ಮಾನುಭವ ದೇಹಕರಣಾನುಭವಗಳಲಿ । ಮರ್ಮವಿದು ಮುಕ್ತಿಗೆಲೊ – ಮಂಕುತಿಮ್ಮ ॥ ೭೫೩ ॥

ಜೀವನದ ಪರಿಪೂರ್ಣದರ್ಶನವದೊಂದಿಹುದು । ಭೂವ್ಯೋಮ ವಿಸ್ತರದ ಮಿತಿಯ ಮೀರ್ದುದುದು ॥ ದೇವ ನರ ಪಶು ಸಸಿಗಳೆಲ್ಲ ಕುಣಿಯುವರಲ್ಲಿ । ಭಾವಿಸಾ ಚಿತ್ರವನು – ಮಂಕುತಿಮ್ಮ ॥ ೩೨೧ ॥

ತರಣಿದರ್ಶನಕಿಂತ ಕಿರಣಾನುಭವ ಸುಲಭ । ಪರಮಶಾಸ್ತ್ರಕ್ಕಿಂತ ಸರಿಯುದಾಹರಣೆ ॥ ಪರಮತತ್ತ್ವ ಕಂಡ ಗುರುವನರಸುವುದೆಲ್ಲಿ? । ದೊರೆತಂದು ನೀಂ ಧನ್ಯ – ಮಂಕುತಿಮ್ಮ ॥ ೭೭೪ ॥

ಕಾಗೆಯುಂ ಕೋಗಿಲೆಯುಮೊಂದೆ ಮೇಲ್ನೋಟಕ್ಕೆ । ಯೋಗಿಯುಂ ಸಂಸಾರಭೋಗಿಯೇ ಹೊರಕೆ ॥ ಲೋಗರವೊಲಿರುತೆ ಸುಖದುಃಖಸಂಭ್ರಮಗಳಲಿ । ತ್ಯಾಗಿಯವನ್ ಆಂತರದಿ – ಮಂಕುತಿಮ್ಮ ॥ ೭೭೫ ॥

ಸಾಮಾನ್ಯ ರೂಪದಲಿ, ಸಂಸಾರಿವೇಷದಲಿ । ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ ॥ ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು । ತಾಮಸಿಗೆ ವರವೆಲ್ಲಿ? – ಮಂಕುತಿಮ್ಮ ॥ ೭೭೭ ॥

ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ । ಚರಿಸುತಿರೆ ನರನದರ ಗುರುತನರಿಯದೆಯೆ ॥ ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ । ತೊರೆಯುವನು ದೊರೆತುದನು – ಮಂಕುತಿಮ್ಮ ॥ ೭೭೬ ॥

ತನ್ನ ಮನದಾಟಗಳ ತಾನೆ ನೋಡುತ ನಗುವ । ತನ್ನೊಳಗೆ ತಾನಿರ್ವರಾದವೊಲು ಬಾಳ್ವ ॥ ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ । ಧನ್ಯತೆಯ ಕಂಡವನು – ಮಂಕುತಿಮ್ಮ ॥ ೭೩೯ ॥

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ । ಹೊರಕೋಣೆಯಲಿ ಲೋಗರಾಟಗಳನಾಡು ॥ ವಿರಮಿಸೊಬ್ಬನೆ ಮೌನದೊಳಮನೆಯಲಿ ಶಾಂತಿಯಲಿ । ವರಯೋಗಸೂತ್ರವಿದು – ಮಂಕುತಿಮ್ಮ ॥ ೭೦೧ ॥

ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ । ಹೊರಗೆ ಕಾರ್ಯಧ್ಯಾನವೊಳಗುದಾಸೀನ ॥ ಹೊರಗೆ ಸಂಸೃತಿಭಾರವೊಳಗದರ ತಾತ್ಸಾರ । ವರಯೋಗಮಾರ್ಗವಿದು – ಮಂಕುತಿಮ್ಮ ॥ ೭೭೩ ॥

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ॥ ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ । ಎಲ್ಲರೊಳಗೊಂದಾಗು – ಮಂಕುತಿಮ್ಮ ॥ ೭೮೯ ॥

ನಗುಮನದಿ ಲೋಗರ ವಿಕಾರಂಗಳನು ನೋಡಿ । ಬಿಗಿ ತುಟಿಯ ದುಡಿವಂದು ನೋವಪಡುವಂದು ॥ ಪೊಗು ವಿಶ್ವಜೀವನದ ಜೀವಾಂತರಂಗದಲಿ । ನಗುನಗುತ ಬಾಳ್, ತೆರಳು – ಮಂಕುತಿಮ್ಮ ॥ ೭೨೮ ॥

ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ- । ಲೆಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ ॥ ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗಿ । ಬಲ್ಲವನೆ ಮುಕ್ತನಲ – ಮಂಕುತಿಮ್ಮ ॥ ೮೦೩ ॥

ಮೊಳೆವ ಸಸಿಯೊಳು ನಾನು, ತೊಳಗುವಿನನೊಳು ನಾನು । ಬೆಳೆವ ಶಿಶುವೊಳು ನಾನು, ಕೆಳೆನೋಟ ನಾನು ॥ ಕಳಕಳಿಸುವೆಲ್ಲಮುಂ ನಾನೆಂದು ಭಾವಿಸುತೆ । ಒಳಗೂಡು ವಿಶ್ವದಲಿ – ಮಂಕುತಿಮ್ಮ ॥ ೭೯೫ ॥

ಸಾರ್ವಭೌಮನು ಸೃಷ್ಟಿಯೊಳಗದೊರ್ವನೆ ಕಾಣೊ । ಸರ್ವವನು ತನ್ನಾತ್ಮವೆಂದು ಬದುಕುವನು ॥ ನಿರ್ವಿಕಾರಾಂತರಂಗದಿ ಜಗವ ಧರಿಸುವನು । ಸರ್ವಮಂಗಳನವನು – ಮಂಕುತಿಮ್ಮ ॥ ೮೦೫ ॥

ಗರ್ವಪಡದುಪಕಾರಿ, ದರ್ಪ ಬಿಟ್ಟಧಿಕಾರಿ । ನಿರ್ವಿಕಾರದ ನಯನದಿಂ ನೋಳ್ಪುದಾರಿ ॥ ಸರ್ವಧರ್ಮಾಧಾರಿ, ನಿರ್ವಾಣಸಂಚಾರಿ । ಉರ್ವರೆಗೆ ಗುರುವವನು – ಮಂಕುತಿಮ್ಮ ॥ ೮೦೬ ॥

ಚೆಲುವುನಗುವುಗಳ ಕಂಡವನ ಕಣ್ಣರಳುವುದು । ಅಳುವುನೋವುಗಳ ಕಂಡೊದ್ದೆಯಾಗುವುದು ॥ ಇಳೆಯ ದನಿಗವನೆದೆಯೊಳೊಪ್ಪು ಮರುದನಿಯಹುದು । ಶಿಲೆಯಲ್ಲ ಯೋಗಿಯೆದೆ – ಮಂಕುತಿಮ್ಮ ॥ ೭೨೨ ॥

ಹೊರಗು ಹೊರೆಯಾಗದವೊಲ್ ಒಳಗನನುಗೊಳಿಸಿ, ನೀ- । ನೊಳಗು ಶೆಕೆಯಾಗದವೊಲ್ ಅಳವಡಿಸೆ ಹೊರಗ ॥ ಸರಿಸಮದೊಳೆರಡನುಂ ಬಾಳಿನಲಿ ಜೋಡಿಪುದೆ । ಪರಮಜೀವನಯೋಗ – ಮಂಕುತಿಮ್ಮ ॥ ೮೧೧ ॥

ಸುಟ್ಟ ಹಗ್ಗದ ಬೂದಿ ರೂಪಮಾತ್ರದಿ ಹಗ್ಗ । ಗಟ್ಟಿ ಜಗವಂತು ತತ್ತ್ವಜ್ಞಾನ ಸೋಕೆ ॥ ತೊಟ್ಟಿಹುದು ಲೋಕರೂಪವ, ತಾತ್ತ್ವಿಕನ ವೃತ್ತಿ । ಕಟ್ಟದವನಾತ್ಮವನು – ಮಂಕುತಿಮ್ಮ ॥ ೭೯೭ ॥

ಹರ್ಮ್ಯಾಗ್ರಕೇರಿ ಸೋಪಾನದಿನತೀತನಹೆ । ನಿರ್ಮಮತೆಗೇರಿ ಕರ್ಮಾತೀತನಪ್ಪೆ ॥ ಬ್ರಹ್ಮಪದದಿಂದ ಧರ್ಮಾಧರ್ಮಳ ನಿಯಮ । ನಿರ್ಮಾಲ್ಯವಾಗುವುದು – ಮಂಕುತಿಮ್ಮ ॥ ೮೦೨ ॥

ಬಿಟ್ಟೆನೆಲ್ಲವನೆಂಬ ಹೃದಯಶೋಷಣೆ ಬೇಡ । ಕಟ್ಟಿಕೊಳ್ಳುವ ಶಿರಃಪೀಡೆಯುಂ ಬೇಡ ॥ ತೊಟ್ಟು ನಿರಹಂಕೃತಿಯ ಕವಚವನು ನೀಂ ಪೋರು । ಮುಟ್ಟದಿಳೆಯಸಿ ನಿನ್ನ – ಮಂಕುತಿಮ್ಮ ॥ ೮೧೩ ॥

ಜನ್ಮ ಸಾವಿರ ಬರಲಿ, ನಷ್ಟವದರಿಂದೇನು? । ಕರ್ಮ ಸಾವಿರವಿರಲಿ, ಕಷ್ಟ ನಿನಗೇನು? ॥ ಬ್ರಹ್ಮ ಹೃದಯದಿ ನಿಲ್ಲೆ ಮಾಯೆಯೇಂಗೈದೊಡೇಂ? । ಇಮ್ಮಿದಳ ಸರಸವದು – ಮಂಕುತಿಮ್ಮ ॥ ೯೧೬ ॥

ಹೊರಗೆ, ವಿಶ್ವದಿನಾಚೆ, ದೂರದಲಿ, ನೀಲದಲಿ । ಒಳಗೆ, ಹೃತ್ಕೂಪದಾಳದಲಿ, ಮಸಕಿನಲಿ ॥ ನೆಲೆಗಳಿಂತೆರಡು ಮೂಲ ರಹಸ್ಯಕವುಗಳುಲಿ । ಕಲೆತಂದು ನೀಂ ಜ್ಞಾನಿ – ಮಂಕುತಿಮ್ಮ ॥ ೮೯೨ ॥

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ । ನಗುವ ಕೇಳುತ ನಗುವುದತಿಶಯದ ಧರ್ಮ ॥ ನಗುವ ನಗಿಸುವ ನಗಿಸಿ ನಗುತ ಬಾಳುವ ವರವ । ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ॥ ೯೧೭ ॥

ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ- । ದಂತರಂಗದ ಕಡಲು ಶಾಂತಿಗೊಳಲಹುದು ॥ ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ । ಸಂತಯಿಸು ಚಿತ್ತವನು – ಮಂಕುತಿಮ್ಮ ॥ ೭೦೫ ॥

ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ । ಆಯಸಂಬಡಿಸದವೊಲಂತರಾತ್ಮನನು ॥ ಮಾಯೆಯೊಡನಾಡುತ್ತ, ಬೊಮ್ಮನನು ಭಜಿಸುತ್ತ । ಆಯುವನು ಸಾಗಿಸೆಲೊ – ಮಂಕುತಿಮ್ಮ ॥ ೭೩೬ ॥

ವಿಷಯಭೋಗವಿರಕ್ತಿ, ವಿಶ್ವಲೀಲಾಸಕ್ತಿ । ಕೃಷಿಗೆ ಸಂತತ ದೀಕ್ಷೆ, ವಿಫಲಕೆ ತಿತಿಕ್ಷೆ ॥ ವಿಷಮದಲಿ ಸಮದೃಷ್ಟಿ, ವಿವಿಧಾತ್ಮ ಸಂಸೃಷ್ಟಿ । ಕುಶಲಸಾಧನಗಳಿವು – ಮಂಕುತಿಮ್ಮ ॥ ೭೭೮ ॥

ಕ್ಷಮೆ ದೋಷಿಗಳಲಿ, ಕೆಚ್ಚೆದೆ ವಿಧಿಯ ಬಿರುಬಿನಲಿ । ಸಮತೆ ನಿರ್ಮತ್ಸರತೆ ಸೋಲ್ಗೆಲುವುಗಳಲಿ ॥ ಶಮವ ನೀಂ ಗಳಿಸಲೀ ನಾಲ್ಕು ತಪಗಳೆ ಸಾಕು । ಭ್ರಮೆಯೊ ಮಿಕ್ಕೆಲ್ಲ ತಪ – ಮಂಕುತಿಮ್ಮ ॥ ೭೧೫ ॥

ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ । ಹಿತವಿರಲಿ ವಚನದಲಿ, ಋತವ ಬಿಡದಿರಲಿ ॥ ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ । ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ ॥ ೭೨೪ ॥

ಜಗದ ಬಂದೀಗೃಹದಿ ಬಿಗಿಯುತಿರೆ ವಿಧಿ ನಿನ್ನ । ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ॥ ಗಗನದೊಳನಂತದರ್ಶನದೆ ಮುಕ್ತಿಯನೊಂದು । ನಗುನಗಿಸಿ ಲೋಕವನು – ಮಂಕುತಿಮ್ಮ ॥ ೪೬೦ ॥

ಒಮ್ಮೆ ಹೂದೋಟದಲಿ, ಒಮ್ಮೆ ಕಳೆಕೂಟದಲಿ । ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ ॥ ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ । ಬ್ರಹ್ಮಾನುಭವಿಯಾಗೊ – ಮಂಕುತಿಮ್ಮ ॥ ೭೫೪ ॥

ಜೀವದುದಯ ರಹಸ್ಯ, ಜೀವವಿಲಯ ರಹಸ್ಯ । ಜೀವನದ ದೃಶ್ಯ ಮರುವಿನ ಬಿಸಿಲ್ಗುದುರೆ ॥ ಭಾವಿಸಲಿದೇ ತತ್ತ್ವ; ಬ್ರಹ್ಮಮಾಯೆಯೆ ವಿಶ್ವ । ಕೇವಲಾತ್ಮ ಬ್ರಹ್ಮ – ಮಂಕುತಿಮ್ಮ ॥ ೯೧೯ ॥